ಬಿಲೋನಿ
ಬಿಲೋನಿಫಾರ್ಮೀಸ್ ಗಣದ ಬಿಲೋನಿಡೀ ಕುಟುಂಬಕ್ಕೆ ಸೇರಿದ ಮೂಳೆಮೀನು. ಇದಕ್ಕೆ ಗಾರ್‍ಮೀನು ಎಂಬ ಹೆಸರು ಉಂಟು. ಇದು ಸುಮಾರು 60 ಸೆಂಮೀ ಉದ್ದ ಬೆಳೆಯುತ್ತದೆ. ತಲೆಯ ಮೇಲ್ಭಾಗ ಹಾಗೂ ಬೆನ್ನುಗಳು ಹಳದಿಮಿಶ್ರಿತ ಹಸುರು ಬಣ್ಣದವು. ಅಲ್ಲಲ್ಲಿ ಕಂದುಚುಕ್ಕೆಗಳುಂಟು. ಅಕ್ಕಪಕ್ಕಗಳ ಬಣ್ಣ ಬೆಳ್ಳಿಯಂತೆ, ಉದರಭಾಗದ ಬಣ್ಣ ಬಿಳಿ. ಇದರ ಎರಡು ದವಡೆಗಳೂ ಕೊಕ್ಕಿನಂತೆ ಉದ್ದವಾಗಿವೆ. ಎರಡರಲ್ಲೂ ಉದ್ದವಾದ ಮತ್ತು ಮೊನಚಾದ ಹಲ್ಲುಗಳಿವೆ. ಸಮುದ್ರದ ಮೇಲಿನಮಟ್ಟದ ನೀರಿನಲ್ಲಿ ಈಜುತ್ತ ಸಣ್ಣ ಸಣ್ಣ ಮೀನುಗಳನ್ನು ಸಿಗಡಿ ಏಡಿಗಳನ್ನು ಹಿಡಿದು ತಿನ್ನುತ್ತದೆ. ಇದರ ಗಂಟಲು ಸಣ್ಣದಾದ್ದರಿಂದ ಸಣ್ಣ ಮೀನುಗಳನ್ನು ಮಾತ್ರ ಇದು ನುಂಗಬಲ್ಲುದು. ಈಜುವಾಗ ತರಂಗಗತಿಯಲ್ಲಿ ಬಳುಕುತ್ತದೆ. ಈ ಜಾತಿಯಲ್ಲಿ ಸುಮಾರು ಐವತ್ತು ಪ್ರಭೇದಗಳಿವೆ. ಎಲ್ಲವೂ ಉಷ್ಣವಲಯದ ಸಮುದ್ರಗಳಲ್ಲಿ ಜೀವಿಸುವುವು. ಭಾರತದ ಸಮುದ್ರಗಳಲ್ಲಿ ಬಿಲೋನಿ ಸ್ಟ್ರಾಂಜಿಲ್ಯೂರಸ್ ಪ್ರಭೇದ ಕಾಣದೊರೆಯುತ್ತದೆ. ಇದು ತಿನ್ನುವುದಕ್ಕೆ ಬಹಳ ರುಚಿಯಾದ ಮೀನಾದರೂ ಇದರ ಮೂಳೆಗಳು ಹಸುರಾಗಿರುವುದರಿಂದ ಅಷ್ಟಾಗಿ ಜನಪ್ರಿಯವಾಗಿಲ್ಲ. 

	ಇದು ಮೊಟ್ಟೆಯಿಡುವ ಶ್ರಾಯ ಸೆಪ್ಟೆಂಬರ್-ಡಿಸೆಂಬರ್. ಆ ಸಮಯದಲ್ಲಿ ಸಮುದ್ರದಿಂದ ಅಳಿವೆಗಳಿಗೆ ವಲಸೆಬರುತ್ತದೆ. ಮೊಟ್ಟೆಗಳನ್ನು ನೀರಿನ ಪಾಚಿಗಳಿಗೆ ಅಂಟಿಸಿಡುವುದು ಇದರ ಪರಿಪಾಠ. 

	ಇದನ್ನು ಗಾಳ ಇಲ್ಲವೆ ಬಲೆಯ ಸಹಾಯದಿಂದ ಹಿಡಿಯಲಾಗುತ್ತದೆ. ತಮಿಳುನಾಡಿನ ತಂಜಾವೂರು ಜಿಲ್ಲೆಯ ಅರ್ಕಾಟ್-ತೊರೈ, ಸೇತುಭಾವಚತ್ರಮ್, ರಾಮನಾಡು ಜಿಲ್ಲೆಯ ಪಾಂಬನ್, ಕೇರಳದ ಕಲ್ಲಿಕೋಟೆ, ತಾನೂರ್, ಚಾಲಿಯಮ್ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹಂಗರುಕಟ್ಟೆ ಇದರ ಉದ್ಯಮಕ್ಕೆ ಹೆಸರಾಂತಿವೆ. 			
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ